ಕೈಲ್ ಮುಹೂರ್ತ

ಕೊಡವರ ಒಂದು ಹಬ್ಬ. ಆಗಸ್ಟ್ ಕಡೆಯ ಹೊತ್ತಿಗೆ ಗದ್ದೆಯ ಕೆಲಸವೆಲ್ಲ ಮುಗಿದ ಮೇಲೆ ವಿಶ್ರಾಂತಿಗಾಗಿ, ವಿನೋದಕ್ಕಾಗಿ ಜನ ಒಟ್ಟಾಗಿ ಬೇಟೆಗೆ ತೊಡಗುವುದು ಈ ಹಬ್ಬದ ವೈಶಿಷ್ಟ್ಯ.

ಸಾಮಾನ್ಯವಾಗಿ ಈ ಹಬ್ಬವನ್ನು ಕೈದುಪೊಳುದು, ಕೈಲ್‍ಪೋದು, ಕೈಲ್‍ಪೊಡು ಎಂದೂ ಕರೆಯುತ್ತಾರೆ. ಕೈದು ಎಂದರೆ ಆಯುಧಗಳನ್ನು ಪೊಳುದು ಎಂದರೆ ಬೆಳಗಿ ಪೂಜಿಸುವುದು, ಬಳಸುವುದು ಎಂದು ಕೆಲವರು ವ್ಯಾಖ್ಯಾನ ಮಾಡುತ್ತಾರೆ. ಕೈಲ್‍ಪೊಡು ಎಂದರೆ ಒಬ್ಬರು ಮತ್ತೊಬ್ಬರೊಡನೆ ಕೂಡಿ ನಲಿಯುವ ಹಬ್ಬ (ಕೈಲ್ ಎಂದರೆ ಕೈ ಅಥವಾ ಹಸ್ತ, ಪೊಡು ಎಂದರೆ ಸೇರುವಿಕೆ, ಅಂದರೆ ಪರಸ್ಪರರ ಕೈಕೂಡಿಸಿ ನಡೆಸುವ ಹಬ್ಬ) ಎಂಬುದಾಗಿ ಮತ್ತೆ ಕೆಲವರು ವ್ಯಾಖ್ಯಾನ ಮಾಡುತ್ತಾರೆ. ಇಂದಿಗೂ ದೂರದ ಸ್ಥಳಗಳಲ್ಲಿ ವಾಸಿಸುವ ನೆಂಟರಿಷ್ಟರು ಈ ಹಬ್ಬಕ್ಕಾಗಿ ಒಂದು ಕಡೆ ಸೇರುತ್ತಾರೆ.

ವ್ಯವಸಾಯದ ಕಾಲ ಪ್ರಾರಂಭವಾದಾಗ, ನಾಟಿ ಕೆಲಸ ಮುಗಿಯುವವರೆಗೂ ಬೇಟೆಗೆ ಹೋಗಬಾರದಾಗಿ ಬೇಟೆಯ ಆಯುಧಗಳನ್ನೆಲ್ಲ ಮನೆಯ ನೆಲ್ಲಕ್ಕಿ ಬಾಡೆ ಅಥವಾ ಕನ್ನಿಕೋಂಬರೆಗಳಲ್ಲಿ (ಒಂದು ವಿಶಿಷ್ಟ ಕೊಠಡಿ; ಪೂಜಾಗೃಹ) ಇಟ್ಟಿರುತ್ತಾರೆ. ಹಬ್ಬದ ದಿನ ಮನೆಯ ಹಿರಿಯರಿಂದ ಮೊದಲ್ಗೊಂಡು ಕಿರಿಯರವರೆಗೆ ಎಲ್ಲರೂ ಆಯುಧಗಳನ್ನು ಪೂಜಿಸಿ ಅನಂತರ ಅಂದೇ ಬೇಟೆಯನ್ನು ಪ್ರಾರಂಭಿಸುತ್ತಾರೆ.

ಸಾಮಾನ್ಯವಾಗಿ ಈ ಹಬ್ಬ ಸೆಪ್ಟೆಂಬರ್ 3ನೆಯ ತಾರೀಖು ನಡೆಯುತ್ತದೆ. ಕೊಡವರ ಲೆಕ್ಕದ ಪ್ರಕಾರ ಸಿಂಹಮಾಸದ 18ರಂದು ಇದು ಬೀಳುತ್ತದೆ. ಆದರೆ ನಾಲ್ಕುನಾಡು ಮತ್ತು ಮುತ್ತನಾಡು ಮುಂತಾದ ಕಡೆಯವರು ಅದೇ ಮಾಸದ 18ರಂದು ಈ ಹಬ್ಬವನ್ನು ಆಚರಿಸುತ್ತಾರೆ.

ಈ ಹಬ್ಬದ ಹಿಂದಿನ ದಿನವೇ ಮನೆಗೆ ಬೇಕಾದ ಹಂದಿಯ ಮಾಂಸವನ್ನು (ಪಂದಿಯರ್ಚಿ) ಸಿದ್ಧ ಮಾಡಿಕೊಳ್ಳುತ್ತಾರೆ. ಹಂದಿ ಸಾಕಲು ಶಕ್ತಿ ಇಲ್ಲದವರು ಕೊಂಡಾದರೂ ಹಂದಿಯ ಮಾಂಸವನ್ನು ಅಂದು ಪಡೆಯಲೇಬೇಕು ಎಂಬ ನಿಯಮವೂ ಉಂಟು. ಅಂತೂ ಅಂದು ಸಂಜೆಯ ಹೊತ್ತಿಗೆ ಎಲ್ಲರ ಮನೆಗೂ ಹಂದಿಯ ಮಾಂಸ ತಲಪಿರಬೇಕು.

ಹಬ್ಬದ ದಿನ ಬೆಳಗ್ಗೆ ಎದ್ದ ತತ್‍ಕ್ಷಣ, ಮನೆಯಿಂದ ದೂರದಲ್ಲಿರುವ ದೇವಸ್ಥಾನದ ಒಂದು ಗೊತ್ತಾದ ಸ್ಥಳಕ್ಕೆ ಊರವರೆಲ್ಲ ಬಂದು ನಿಶ್ಚಿತ ಗಿಡವೊಂದರಿಂದ ಕೈಬೆರಳು ಗಾತ್ರದ ಗೇಣುದ್ದದ ಮೂರು ಮೂರು ತುಂಡುಗಳನ್ನು ಕಡಿದು, ಅವುಗಳ ಒಂದು ತುದಿಯನ್ನು ಚೂಪಾಗಿಸಿ, ಮತ್ತೊಂದು ತುದಿಯನ್ನು ಸೀಳಿ, ನೇರಳೆ ಎಲೆಗಳನ್ನು ಗರಿಗಳಂತೆ ಕಟ್ಟಿ, ಬಾಣಗಳನ್ನು ತಯಾರಿಸಿ, ಹಾಲು ಬರುವ ಒಂದು ಗಿಡಕ್ಕೆ ಗುರಿಯಿಟ್ಟು. ಬಾಣಗಳನ್ನು ಪ್ರಯೋಗಿಸುತ್ತಾರೆ. ಈ ಪದ್ಧತಿ ಕೆಲವು ಕಡೆ ಮಾತ್ರ ರೂಢಿಯಲ್ಲಿದೆ. ಅನಂತರ ವ್ಯವಸಾಯಕ್ಕೆ ಬಳಸಿದ ನೇಗಿಲು, ಸನಿಕೆ ಮುಂತಾದ ಆಯುಧಗಳನ್ನು ಪೂಜಿಸುತ್ತಾರೆ. ದನಕರುಗಳನ್ನು ತೊಳೆದು, ಪೂಜಿಸಿ, ಪಣೆಪುಟ್ ಎಂಬ ತಿನಿಸನ್ನು ನಿವೇದಿಸುತ್ತಾರೆ. ಪಣೆಪುಟ್ ಎಂದರೆ ಅಕ್ಕಿಹಿಟ್ಟು, ಬೆಲ್ಲ, ಏಲಕ್ಕಿ ಮುಂತಾದವುಗಳಿಂದ ತಯಾರಿಸಿದ ಒಂದು ಸಿಹಿ ತಿಂಡಿ. ಅದೇ ಪ್ರಸಾದವನ್ನು ಅನಂತರ ಮನೆಯವರೂ ಸೇವಿಸುತ್ತಾರೆ. ಬೆಳಗಿನ ಪೂಜೆಯಲ್ಲಿ ಅವರು ಪೂಜಿಸುವ ಮುಖ್ಯ ದೇವರು ಸೂರ್ಯ.

ಮಧ್ಯಾಹ್ನ ಪಂದಿಯರ್ಚಿಯ ಸಾರನ್ನು ಅಕ್ಕಿ ಕಡುಬನ್ನು ವಿಶೇಷ ಭಕ್ಷ್ಯವಾಗಿ ಊಟ ಮಾಡುತ್ತಾರೆ. ಆಮೇಲೆ ಸಾರಾಯಿ ಕಳ್ಳು ಮುಂತಾದುವನ್ನು ಮನಸ್ಸು ಬಂದಷ್ಟು ಕುಡಿಯುತ್ತಾರೆ. ಹಬ್ಬದ ಅತಿ ಮಹತ್ತ್ವದ ಘಟ್ಟ ಮಧ್ಯಾಹ್ನದ ಊಟ.
ಊಟದ ಅನಂತರ ಹಬ್ಬ ತನ್ನ ಮೂರನೆಯ ಘಟ್ಟವನ್ನು ತಲುಪುತ್ತದೆ. ಮಧ್ಯಾಹ್ನ ಕನ್ನಿಕೋಂಬರೆಯಲ್ಲಿಟ್ಟಿರುವ ಆಯುಧಗಳಿಗೆ, ಧೂಪ, ದೀಪ, ಗಂಧ, ತಿಲಕಗಳಿಂದ ಪೂಜೆ ನಡೆಸುತ್ತಾರೆ. ಈ ಪೂಜೆಗೆ ಒಂದು ವಿಶಿಷ್ಟ ಬಗೆಯ ಪುಷ್ಪಗಳನ್ನು ಮಾತ್ರ ಬಳಸುತ್ತಾರೆ. ಎಲ್ಲರೂ ಹೊಸ ಬಟ್ಟೆ ಧರಿಸುತ್ತಾರೆ. ಕುಟುಂಬದ ಗಂಡಸರೆಲ್ಲರೂ ಪೂಜೆಗಿಟ್ಟಿರುವ ಆಯುಧಗಳ ಮುಂದೆ ಬಂದು ನಿಲ್ಲುತ್ತಾರೆ. ಕಾರಣನನ್ನು ಪೂಜಿಸುತ್ತಾರೆ. ಕಾರಣ ಎಂದರೆ ಮನೆತನದ ಮೊದಲ ಹಿರಿಯ. ಆಮೇಲೆ ಕುಟುಂಬದ ಹಿರಿಯ ವ್ಯಕ್ತಿ ಒಂದು ಕೋವಿಯನ್ನು ಕೈಗೆ ತೆಗೆದುಕೊಂಡು, ಅಲ್ಲಿ ನಿಂತಿರುವವರಲ್ಲಿ ಹಿರಿಯನೊಬ್ಬನಿಗೆ ಅದನ್ನು ನೀಡುತ್ತಾನೆ. ಹಾಗೆ ಕೋವಿಯನ್ನು ನೀಡುವಾಗ `ನರಿನೋ ಪಂದಿನೋ ಬಟ್ಟೆ ಕೆಟ್ಟ ಪಣಂಗ್ ಮಿತ್ತುರುಕ್ ತೊಣೆಯಾಯಿತ್ ನಿಲ್, ರಾಜಂಗ್ ಮಿನಿಯತೆ, ದೇವರ ಮರೆಯತೆ (ಹುಲಿ ಬರುವಾಗ, ಹಂದಿ ಬರುವಾಗ ದಾರಿ ಬಿಟ್ಟು ನಿಲ್ಲು, ಶತ್ರುವನ್ನು ತಡೆಯಲು ಹೋಗಬೇಡ, ಹಾಗೆ ತಡೆಯುವ ಹಾಗಿದ್ದರೆ, ಆತ ಚಲಿಸದಂತೆ ದಾರಿಯನ್ನು ಅಡ್ಡಗಟ್ಟಿ ತಡೆ, ಮಿತ್ರನಿಗೆ ಸಹಾಯಕನಾಗಿರು, ರಾಜನನ್ನು ಮೀರದೆ, ದೇವರನ್ನು ಮರೆಯದೆ ಇರು) ಎಂದು ಬುದ್ಧಿವಾದ ಹೇಳುತ್ತಾನೆ. ಅನಂತರ ಉಳಿದವರು ಕ್ರಮವಾಗಿ ಆಯುಧಗಳನ್ನು ಪಡೆಯುತ್ತಾರೆ. ಹಾಗೆ ಮಾಡುವಾಗ ಎಲ್ಲರೂ ಆಯುಧಗಳನ್ನು ಕೊಡುವ ಹಿರಿಯನ ಪಾದ ಮುಟ್ಟಿ ನಮಸ್ಕರಿಸುತ್ತಾರೆ.

ಇದಾದ ಅನಂತರ ಎಲ್ಲ ಗಂಡಸರೂ ಊರಿನ ದೇವಾಲಯದ ಬಳಿ ಸೇರಿ, ವಿವಿಧ ರೀತಿಯ ಆಟಗಳ ಸ್ಪರ್ಧೆ ನಡೆಸುತ್ತಾರೆ. ಅದೇ ಸಂದರ್ಭದಲ್ಲಿ ದೂರದಲ್ಲಿ ಕಟ್ಟಿರುವ ತೆಂಗಿನಕಾಯಿಗೆ ಗುಂಡು ಹಾರಿಸುವುದು ಮುಂತಾದ ವಿನೋದಗಳು ನಡೆಯುತ್ತವೆ. ಇಷ್ಟಾದ ಮೇಲೆ ಹಿಂದಿನ ಕಾಲದಲ್ಲಿ ಗಂಡಸರೆಲ್ಲ ಯುದ್ಧಕ್ಕೆ ಹೋಗುತ್ತಿದ್ದರು. ಈಗ ಬೇಟೆಗೆ ಹೋಗುತ್ತಾರೆ.

ಬೇಟೆಗೆ ನಾಯಿ, ನಗಾರಿಗಳನ್ನು ಸಜ್ಜು ಮಾಡಿಕೊಳ್ಳುತ್ತಾರೆ. ನಾಯಿ ಕೂಡಿಸುವವರು ಎಲ್ಲಿ ನಿಲ್ಲಬೇಕು ಎಂಬುದರ ಬಗ್ಗೆ ವಿಧಿವತ್ತಾದ ನಿಯಮಗಳಿವೆ. ಬೇಟೆಯಲ್ಲಿ ಯಾವುದೇ ಕಾಡುಪ್ರಾಣಿಗೆ ಗುಂಡು ಹೊಡೆದು ಕೊಲ್ಲದೆ ಗುರಿ ತಪ್ಪಿದವರಿಗೆ ತಕ್ಕ ಶಿಕ್ಷೆಯೂ ಇದೆ. ಬೇಟೆಯಲ್ಲಿ, ಆಹಾರವಾಗಿ ಉಪಯೋಗಿಸುವ ಪ್ರಾಣಿಯನ್ನು ಕೊಂದವನಿಗೆ ಅದರ ತಲೆ, ಒಂದು ತೊಡೆ, ಮತ್ತು ಬೆನ್ನಿನ ಹುರಿಯನ್ನು ಬಹುಮಾನವಾಗಿ ಕೊಡುತ್ತಾರೆ. ಸತ್ತುಬಿದ್ದ ಪ್ರಾಣಿಯನ್ನು ಮೊದಲು ಮುಟ್ಟಿದವನಿಗೆ ಆ ಪ್ರಾಣಿಯ ಒಂದು ಕಾಲು ಮತ್ತು ಬೆನ್ನಿನ ಹುರಿಯ ಒಂದು ಭಾಗ ಬಹುಮಾನವಾಗಿ ಸಿಗುತ್ತದೆ. ಉಳಿದವರು ಮಿಕ್ಕ ಮಾಂಸವನ್ನು ಹಂಚಿಕೊಳ್ಳುತ್ತಾರೆ. ಸಾಮಾನ್ಯವಾಗಿ ಕೈಲ್ ಮುಹೂರ್ತ ದೇವರ ದಿವಸಗಳಾದ ಬುಧವಾರವೋ ಶನಿವಾರವೋ ಬಂದರೆ ಅಂದು ಬೇಟೆಗೆ ಹೋಗುವುದಿಲ್ಲ.

ಹೀಗೆ ಈ ಹಬ್ಬ ಒಂದೇ ದಿನದಲ್ಲಿ ಮುಕ್ತಾಯಗೊಂಡರೂ ಹಬ್ಬದ ನೆನಪು ಮಾತ್ರ ಅನೇಕ ದಿನಗಳವರೆಗೆ ಕೊಡವರ ಮನಸ್ಸಿನಲ್ಲಿ ತೇಲುತ್ತಲೇ ಇರುತ್ತದೆ. ಪ್ರಾಚೀನ ಸಮಾಜದ ಅಗತ್ಯಗಳಲ್ಲೊಂದಾದ ಬೇಟೆಯ ಪ್ರಾಮುಖ್ಯವನ್ನು ಎತ್ತಿ ತೋರಿಸುತ್ತದಾಗಿ ಈ ಹಬ್ಬಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ.						(ಡಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ